ಡಿಪ್ನಾಯ್
ಇದು ಆಸ್ಟಿಕ್ತಿಯೀಸ್ ವರ್ಗಕ್ಕೆ ಸೇರಿದ ಒಂದು ಮತ್ಸ್ಯ ಗಣ. ಫುಪ್ಪುಸ ಹಾಗೂ ಕಿವಿರುಗಳೆರಡನ್ನೂ ಪಡೆದಿರುವ ಮೀನುಗಳನ್ನು ಇದು ಒಳಗೊಂಡಿದೆ. ಇವುಗಳ ವಾಸ ಸಿಹಿನೀರಿನಲ್ಲಿ, ಡಿವೋನಿಯನ್ ಯುಗದಲ್ಲಿ ಹೇರಳ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವೆಂದು ಹೇಳಲಾಗಿದೆ. ಟ್ರಯಾಸಿಕ್ ಕಲ್ಪದ ಹೊತ್ತಿಗೆ ಇವುಗಳ ಜಾತಿಸಂಖ್ಯೆ ಕಡಿಮೆಯಾಗಿ ಈಗ ಕೇವಲ ಮೂರು ಜಾತಿಗಳಿಂದ ಪ್ರತಿನಿಧಿತವಾಗಿವೆ. ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡಿನ ಸರೋವರಗಳಲ್ಲಿ ಮತ್ತು ನದಿಗಳಲ್ಲಿ ಕಾಣಬರುವ ಎಪಿಸೆರಟೋಡಸ್, ಆಫ್ರಿಕದ ಕೆಲವು ಜೌಗುಗಳಲ್ಲಿ ಜೀವಿಸುವ ಪ್ರೋಟಾಪ್ಟರಸ್ ಮತ್ತು ದಕ್ಷಿಣ ಅಮೆರಿಕದ ಜೌಗುಭೂಮಿಗಳಲ್ಲಿ ಕಂಡುಬರುವ ಲೆಪಿಡೊಸೈರನ್ ಎಂಬುದೇ ಈ ಮೂರು ಜಾತಿಗಳು. 

	ಇವುಗಳ ದೇಹ ಉದ್ದವಾಗಿಯೂ ತೆಳುವಾಗಿಯೂ ಇದೆ. ಕಣ್ಣುಗಳು ಚಿಕ್ಕವು. ಮೇಲುದವಡೆಯ ಮುನ್ನೆಲುಬಾಗಲೀ (ಪ್ರೀಮ್ಯಾಕ್ಸಿಲ) ಮೇಲುದವಡೆ ಎಲುಬಾಗಲೀ (ಮ್ಯಾಕ್ಸಿಲ) ಇವುಗಳಲ್ಲಿಲ್ಲ. ಬಾಯಂಗಳದ ಮೇಲೆ ಮತ್ತು ಕೆಳದವಡೆಯ ಅಂಚಿನಲ್ಲಿ ಮೂರು ಜೊತೆ ದೃಢವಾದ ದಂತಫಲಕಗಳುಂಟು. ದೇಹದ ಮೇಲೆಲ್ಲ ಸೈಕ್ಲಾಯ್ಡ್ ಶಲ್ಕಗಳ ಹೊದಿಕೆಯಿದೆ. ಈಜುರೆಕ್ಕೆಗಳು ಕಿರಿದು. ಬೆನ್ನಿನ ಬಾಲದ ಹಾಗೂ ಗುದದ್ವಾರದ ಈಜುರೆಕ್ಕೆಗಳು ಒಂದು ಅವಿಚ್ಛಿನ್ನವಾದ ನಡು ಈಜುರೆಕ್ಕೆಯಿಂದ ಕೂಡಿಕೊಂಡಿವೆ. ಕಿವಿರುಗಳನ್ನು ಸುತ್ತುವರಿದಿರುವ ಕಿವಿರು ಮುಚ್ಚಳ (ಓಪರ್‍ಕ್ಯುಲಮ್) ಉಂಟು. ನೋಟೋಕಾರ್ಡ್ ಇರುವುದು ಈ ಮೀನುಗಳ ಲಕ್ಷಣಗಳಲ್ಲೊಂದು. ಉಸಿರಾಟದ ದ್ವಾರಗಳು ಅಂತಸ್ಥವಾಗಿದ್ದು ಬಾಯಿಯ ಅಂಗಳದೊಂದಿಗೆ ಸಂಪರ್ಕಿಸುವುವು. ದವಡೆಯ ತೂಗಾಡುವಿಕೆ ಸ್ವಯಂಕೀಲದ (ಆಟೊಸ್ಟೈಲಿಕ್) ರೀತಿಯದು. ಮೃದ್ವಸ್ಥಿ ಮೀನುಗಳಲ್ಲಿರುವಂತೆ ಇವುಗಳ ಅನ್ನನಾಳದಲ್ಲಿ ಚೆನ್ನಾಗಿ ಅಭಿವೃದ್ಧಿಹೊಂದಿದ ಒಂದು ಸುರುಳಿ ಕವಾಟವಿದೆ (ಸ್ಪೈರಲ್ ವಾಲ್ವ್). 

	ಈ ಮೀನಿನಲ್ಲಿರುವ ಪುಪ್ಫುಸಗಳು ವಾಯುಚೀಲದ ಮಾರ್ಪಾಟಿನಿಂದ ಉಂಟಾಗಿವೆ.  ವಾಯುಚೀಲಗಳ ಭಿತ್ತಿಗಳ ಕೋಶೀಕರಣ (ಸ್ಯಾಕ್ಯುಲೇಷನ್), ಸ್ನಾಯೀಕರಣ (ಮಸ್ಕ್ಯುಲರೈeóÉೀಷನ್) ಹಾಗೂ ನಾಳೀಕರಣ (ವ್ಯಾಸ್ಕ್ಯುಲರೈeóÉೀಷನ್) ಗಳಿಂದ ಬಲು ಸಮರ್ಥವಾದ ಪುಪ್ಫುಸಗಳ ನಿರ್ಮಾಣವಾಗಿದೆ. ಮೀನುಗಳು ವಾಸಿಸುವ ನೆಲೆಗಳಲ್ಲಿ ನೀರು ಇಂಗಿಹೋದಾಗ ಉಸಿರಾಟ ನಡೆಯುವುದು ಪುಪ್ಫುಸಗಳಿಂದಲೇ. 
	ಗುಂಡಿಗೆ ರಚನೆಯಲ್ಲಿ ಹೆಚ್ಚು ಕಡಿಮೆ ದ್ವಿಚರಿಗಳ ಗುಂಡಿಗೆಯನ್ನೇ ಹೋಲುತ್ತದೆ. ಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳ ಭಾಗಗಳ ನಡುವೆ ಆಂಶಿಕ ತಡಕೆಯಿರುವುದರಿಂದ ಈ ಮೀನುಗಳ ಶ್ವಾಸಾಪಧಮನಿ ಮತ್ತು ದೈಹಿಕ ರಕ್ತಪರಿಚಲನೆಗಳೂ ಅಂಶತಃ ಪ್ರತ್ಯೇಕಿಸಲ್ಪಟ್ಟಿವೆ. ದ್ವಿಚರಿಗಳು, ಉರಗಗಳು, ಪಕ್ಷಿಗಳು ಮತ್ತು ಸ್ತನಿಗಳಲ್ಲಿ ವಿಶೇಷವಾಗಿ ಕಂಡುಬರುವ ದ್ವಿರಕ್ತಪರಿಚಲನೆ ಇಂಥ ಪೂರ್ವಜಸ್ಥಿತಿಯಿಂದಲೇ ಆರಂಭವಾಯಿತೆಂದು ಅಭಿಪ್ರಾಯ ಪಡಲಾಗಿದೆ. ಡಿಪ್ನಾಯ್ ಮೀನುಗಳ ಆಹಾರ ಅಕಶೇರುಕಗಳು ಮತ್ತು ಸಸ್ಯ ಪದಾರ್ಥಗಳು. 

	ಡಿಪ್ನಾಯ್‍ಗಣದಲ್ಲಿ ಸೆರಟೋಡಾಂಟಿಡೀ ಮತ್ತು ಲೆಪಿಡೋಸೆರೆನಿಡೀ ಎಂಬ ಎರಡು ಕುಟುಂಬಗಳುಂಟು. ಸೆರಟೋಡಾಂಟಿಡೀಗೆ ನಿಯೋಡೆರಟೋಡಸ್ ಫಾರ್ಸ್‍ಟರೈ ಎಂಬ ಮೀನು ಸೇರಿದೆ.  ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡಿನ ಬರ್ನೆಟ್ ಹಾಗೂ ಮರ್ರೆ ನದಿಗಳಲ್ಲಿ ವಾಸಿಸುವ ಇದರ ಉದ್ದ ಸುಮಾರು 45. ಇದರ ಈಜುರೆಕ್ಕೆಗಳು ಎಲೆಯಂತಿವೆ.  ಇದು ಒಂಟಿ ಪುಪ್ಫುಸವುಳ್ಳದ್ದು. ನದಿಗಳಲ್ಲಿ ನೀರು ಬತ್ತಿ ಹೋದಾಗ ಇದು ನೀರಿನ ಪಾತಳಿಗೆ ಏರಿ ವಾಯುವನ್ನು ಒಳ ತೆಗೆದುಕೊಳ್ಳುತ್ತದೆ. 

	ಲೆಪಿಡೋಸೆರೆನಿಡೀಗೆ ಸೇರಿದ ಮೀನುಗಳ ದೇಹ ಹಾವು ಮೀನು ರೀತಿಯದು. ಶಲ್ಕಗಳು ಚಿಕ್ಕವು. ಇವುಗಳಲ್ಲಿ ತಂತುಗಳ ಹಾಗಿರುವ ಈಜುರೆಕ್ಕೆಗಳೂ ಎರಡು ಪುಪ್ಫುಸಗಳೂ ಉಂಟು. ಚೌಗು ನೆಲದಲ್ಲಿ ವಾಸಿಸುವ ಈ ಮೀನುಗಳು ನೀರು ಇಂಗಿಹೋದಾಗ ಮಣ್ಣಿನಲ್ಲಿ ಲೋಳೆಯ ಪದಾರ್ಥದಿಂದ ರಚಿತವಾದ ಒಳ ಆವರಣದಿಂದ ಕೂಡಿದ ಲಂಬವಾಗಿರುವ ಬಿಲದಲ್ಲಿ ಏಕಾಂತವಾಸಮಾಡುತ್ತವೆ. ಈ ಕುಟುಂಬದಲ್ಲಿ ಎರಡು ಜಾತಿಗಳುಂಟು. ಒಂದು ದಕ್ಷಿಣ ಅಮೆರಿಕದ ಬಯಲಿನ ಸಿಹಿನೀರಿನಲ್ಲಿ ವಾಸಿಸುವ 3 ಉದ್ದದ ಲೆಪಿಡೋಸೈರೆನ್ ಪ್ಯಾರಡಾಕ್ಸ್, ಇನ್ನೊಂದು ಆಫ್ರಿಕದ ಪ್ರೋಟಾಪ್ಟರಸ್ ಆ್ಯನ್ನೆಕ್ಟನ್ಸ್ ಮತ್ತು ಇನ್ನೆರಡು ಪ್ರಭೇದಗಳು. ಪ್ರೋಟಾಪ್ಟರಸ್ ಜಾತಿಯವೂ ಸುಮಾರು 3 ಉದ್ದ ಬೆಳೆಯುವುದುಂಟು.
(ಬಿ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ